ರಮಜಾನಿನ ಉಪವಾಸಗಳು

ರಮಜಾನ್ ತಿಂಗಳ ಉಪವಾಸವು ಇಸ್ಲಾಮಿನ ಮೂಲ ಆಧಾರ ಸ್ಥಂಭಗಳಲ್ಲಿ ಒಂದಾಗಿದೆ, ಸೌಮ್ (صوم) ಎಂಬುದರ ಅರ್ಥವೇ ಉಪವಾಸ. ಉಪವಾಸವನ್ನು  ಅರಬೀ ಭಾಷೆಯಲ್ಲಿ ಸೌಮ್ (صوم  ) ಎನ್ನುತ್ತಾರೆ. ಸೌಮ್ ಪದದ ಬಹುವಚನ ಸಿಯಾಮ್ (صيام) ಆಗಿದೆ. ಸೌಮ್ ಎಂದರೆ ಒಂದೇ ದಿನದ ಉಪವಾಸ, ಸಿಯಾಮ್ (صيام  ) ಎಂದರೆ ಎರಡಕ್ಕಿಂತ ಹೆಚ್ಚು ಹಾಗೂ ಬಹುದಿನಗಳ ಉಪವಾಸಗಳು ಎಂದಾಗಿದೆ. ಸಿಯಾಮ್ ಶಬ್ದವು ನಸರ(نصر ) ಭಾಗದಿಂದ ಸಾಮ ಯಸೂಮು(صاميصوم) ಎಂಬ ಮೂಲ ಶಬ್ದದಿಂದ ಬಂದಿದೆ. ರೊಜಾ ಶಬ್ದದ ಅರ್ಥ ಉಪವಾಸವಿರುವುದು ಅಥವ ತಡೆಯುವುದೆಂದಾಗಿದೆ, ಅಂದರೆ ಅನ್ನಪಾನೀಯ, ಅನಾವಶ್ಯಕ ಮಾತುಕತೆ, ಶಾರೀರಿಕ ಸಂಭೋಗದಿಂದ ತಮ್ಮನ್ನು ತಡೆದಿಡುವುದು. (ಅಲ್ ಖಾಮ್ಮಸುಲ್ ಮುಹೀತ್ : 1020, ಗರಿಬುಲ್ ಹದೀಸ್ : 1/325)

ಪರಿವಿಡಿ

 

ಉಪವಾಸ ಕೇವಲ ಈ ಜನಾಂಗಕ್ಕಾಗಿ ಉತ್ತಮ ವಿಶೇಷ ಕೊಡುಗೆಯಲ್ಲ

   ಅಲ್ಲಾಹ್’ನು ಹೇಳಿದನು;   “ವಿಶ್ವಾಸಿಗಳೇ, ನೀವು ಧರ್ಮನಿಷ್ಟರಾಗಬೇಕೆಂದು, ನಿಮಗಿಂತ ಹಿಂದಿನವರಿಗೆ ಕಡ್ದಾಯಗೊಳಿಸಿದಂತೆ ನಿಮಗೂ ಉಪವಾಸಗಳನ್ನು ಕಡ್ಡಾಯಗೊಳಿಸಲಾಗಿದೆ,” (ಅಲ್ ಬಖರ : 183) ಈ ಸೂಕ್ತಿಯಿಂದ ತಿಳಿಯುವುದೇನೆಂದರೆ ಉಪವಾಸಗಳು ಪ್ರಾಚೀನ ಆರಾಧನಾ ಕರ್ಮಗಳಲ್ಲೊಂದಾಗಿದೆ. ನಮಗಿಂತ ಮುಂಚಿನ ಜನಾಂಗಗಳಿಗೂ ಕಡ್ದಾಯಗೊಳಿಸಲಾಗಿತ್ತು, ಅಂತೆಯೇ ನಮ್ಮ ಮೇಲೂ ಸಹ ಕಡ್ಡಾಯವಾಗಿವೆ. ಆ ಹಿಂದಿನ ಜನರೂ ಕೂಡ ರಮಜಾನಿನ ಉಪವಾಸಗಳಿಗೆ ಬದ್ದರಾಗಿದ್ದರೆ? ಎಂಬುದಕ್ಕೆ ಮುಹಮ್ಮದ್(ಸ)ರಿಂದ ಯಾವುದೇ ಹದೀಸ್ ಅಥವ ಉಲ್ಲೇಖ ದೊರೆಯುವುದಿಲ್ಲ. ( ಮಜ್’ಮುಆಎ ಫತಾವಾ ಶೇಖ್ ಇಬ್ನೆ ಬಾಜ್ : 8/15)

 

ಉಪವಾಸಗಳು ಯಾವ ವರ್ಷ ಕಡ್ಡಾಯವಾದವು

  ರಮಜಾನಿನ ಉಪವಾಸಗಳು 2 ನೇ ಹಿಜರಿಯಲ್ಲಿ (ಇಸ್ಲಾಮಿ ವರ್ಷದ ಆರಂಭದಿಂದ ಎರಡನೇ ವರ್ಷ) ಕಡ್ಡಾಯವಾದವು, ಮುಹಮ್ಮದ್(ಸ)ರು ತಮ್ಮ ಜೀವನದಲ್ಲಿ 9 ರಮಜಾನ್ ತಿಂಗಳುಗಳ ಉಪವಾಸಗಳನ್ನು ಆಚರಿಸಿದರು. ಇಮಾಮ್ ನವವಿ (ರ ಅ) ಹೇಳುವರು, ಮುಹಮ್ಮದ್(ಸ)ರು 9 ರಮಜಾನ್ ತಿಂಗಳುಗಳ ಉಪವಾಸಗಳನ್ನು ಆಚರಿಸಿದರು, ಹಿಜರಿಯ 2 ನೇ ವರ್ಷ ಶಾಬಾನ್ ತಿಂಗಳಲ್ಲಿ ರಮಜಾನ್’ನ  ಉಪವಾಸಗಳು ಕಡ್ಡಾಯವಾಗಿದ್ದವು. ಮುಹಮ್ಮದ್(ಸ)ರ ಮರಣ 11 ನೇ ಹಿಜರಿ ರಬಿಉಲ್ ಅವ್ವಲ್ ತಿಂಗಳಲ್ಲಿ ಆಗಿತ್ತು. ಈ ಪ್ರಕಾರವಾಗಿ ಮುಹಮ್ಮದ್(ಸ)ರ ಜೀವನದಲ್ಲಿ 9 ರಮಜಾನ್ ತಿಂಗಳುಗಳು ದೊರಕಿದವು”. (ಅಲ್ ಮಜ್’ಮು : 250/6)

 

 ರಮಜಾನಿನ ಉಪವಾಸಗಳು ಯಾವ ವ್ಯಕ್ತಿಯ ಮೇಲೆ ಕಡ್ಡಾಯವಾಗಿವೆ

  ಯಾವ ವ್ಯಕ್ತಿಯಲ್ಲಿ ಈ 5  ಷರತ್ತುಗಳು ಕಂಡು ಬರುತ್ತವೆಯೋ ಅವನಿಗೆ ಉಪವಾಸಗಳು ಕಡ್ದಾಯವಾಗಿವೆ.

·         ಮುಸ್ಲಿಮನಾಗಿರಬೇಕು

·         ಮುಸ್ಲಿಮನಾಗಿದ್ದು ಉಪವಾಸವಿಡುವ ಸಾಮರ್ಥ್ಯವಿರಬೇಕು

·         ಉಪವಾಸವಿಡುವಷ್ಟು ಶಕ್ತನಾಗಿರಬೇಕು

·         ಸ್ವಸ್ಥಳದಲ್ಲಿರಬೇಕು (ಯಾತ್ರಿಕನಾಗಿರಬಾರದು)

·         ಯಾವುದೇ ತಡೆ ಇರಬಾರದು

  ಮೊದಲನೇ ಷರತ್ತು; ಉಪವಾಸವಿಡುವವನು ಮುಸ್ಲಿಮನಾಗಿರಬೇಕು, ಮುಸ್ಲಿಮೇತರರಿಗೆ(ಕಾಫಿರ್) ಉಪವಾಸವಿಡುವುದು ಕಡ್ಡಾಯವಲ್ಲ. ಅದು ಅವರಿಗೆ ಔಚಿತ್ಯವೂ ಅಲ್ಲ. ಆತನು ಇಸ್ಲಾಮ್ ಸ್ವೀಕರಿಸಿ ಮುಸ್ಲಿಮನಾದರೂ ಆತನಿಗೆ ಹಿಂದಿನ ಉಪವಾಸಗಳು ಕಡ್ಡಾಯವಲ್ಲ, ಅಲ್ಲಾಹ್’ನು ಹೇಳಿದನು; “ ಅವರು ಮಾಡಿದ ಖರ್ಚು ಅವರಿಂದ ಸ್ವೀಕೃತವಾಗದೇ ಇರುವುದಕ್ಕೆ ಕಾರಣವಿಷ್ಟೇ, ಅವರು ಅಲ್ಲಾಹ್ ಮತ್ತು ಅವನ ರಸೂಲರನ್ನು ಧಿಕ್ಕರಿಸುತ್ತಾರೆ, ತೀರಾ ಅಲಸ್ಯದೊಂದಿಗೆ ನಮಾಜ್’ಗೆ ಬರುತ್ತಾರೆ ಮತ್ತು ತೀರಾ ಒಲ್ಲದ ಮನಸ್ಸಿನಿಂದ ಖರ್ಚು ಮಾಡುತ್ತಾರೆ”. ( ಅತ್ತೌಬ : 54)

  ಎರಡನೇ ಷರತ್ತು ;ಉಪವಾಸವಿಡುವವನು ಉಪವಾಸಕ್ಕೆ ತಕ್ಕ ಸಾಮರ್ಥ್ಯವನ್ನು ಹೊಂದಿರಬೇಕು, ಕೇವಲ ವಯಸ್ಕ ಹಾಗೂ ತಿಳುವಳಿಕೆಯುಳ್ಳ ವ್ಯಕ್ತಿ ಮಾತ್ರ ಉಪವಾಸವಿಡಲು ಯೋಗ್ಯನಾಗಿದ್ದಾನೆ. ಮಕ್ಕಳು ಹಾಗೂ ಬುದ್ಧಿಭ್ರಮಣೆ (ಹುಚ್ಚುತನ) ಉಳ್ಳವರು, ಜ್ಞಾನ ಹಾಗೂ ಬುದ್ಧಿ ಇರದ ಕಾರಣ ತಿಳುವಳಿಕೆ ಇಲ್ಲದವರಾಗಿರುತ್ತಾರೆ. ಈ ಕಾರಣದಿಂದಲೇ ಅವರು ಸರ್ವ ಧಾರ್ಮಿಕ ಕಾರ್ಯಗಳಿಂದ ಮುಕ್ತರಾಗಿದ್ದಾರೆ, ಅಲ್ಲಾಹ್’ನ ಹತ್ತಿರ ಇವರ ಯಾವುದೇ ಕೆಲಸ ಕಾರ್ಯಗಳಿಗೆ ವಿಚಾರಣೆಯಿಲ್ಲ.

  ಮೂರನೇ ಷರತ್ತು;ಉಪವಾಸವಿಡುವ ಕ್ಷಮತೆಯುಳ್ಳವರಿಗೆ ಮಾತ್ರ ಆಜ್ಞೆಯಿದೆ, ನಿಶ್ಯಕ್ತ, ಅಸಹಾಯಕ ಸಹನಶಕ್ತಿ ಇಲ್ಲದವರಿಗೆ ಉಪವಾಸದ ಆಜ್ಞೆಯಿಲ್ಲ, ಬಿಡುವಿದೆ. ಆದರೆ ಬಿಡುವು ಎರಡು ಪ್ರಕಾರದಲ್ಲಿದೆ, ಶಾಶ್ವತ ಮತ್ತು ಅಶಾಶ್ವತ. ಅಲ್ಲಾಹ್’ನು ಹೇಳಿದನು; (ಆ ದಿನಗಳಲ್ಲಿ) ರೋಗಿಯಾಗಿರುವವನು ಅಥವ ಪ್ರಯಾಣದಲ್ಲಿರುವವನು, ಬೇರೆ ದಿನಗಳಲ್ಲಿ ಎಣಿಕೆ ಪುರ್ತಿಗೊಳಿಸಲಿ( ತಪ್ಪಿರುವ ಉಪವಾಸಗಳ ಸಂಖ್ಯೆ)  ಇದೇ ಸೂಕ್ತಿಯ ಮುಂದಿನ ಭಾಗದಲ್ಲಿ ತಿಳಿಸಲಾಗಿದೆ, ರೋಗಿ ಸ್ವಸ್ಥನಾದಾಗ ಅಥವ ಅವನ ಪ್ರಯಾಣ ಪೂರ್ಣಗೊಂಡಾಗ ಉಪವಾಸವಿಡಬೇಕು. ಮುಂದೆ ಸ್ಥಾಯಿ (ಶಾಶ್ವತ) ರೂಪದಲ್ಲಿ ತಿಳಿಸಲಾಯಿತು, ಬೇರೆ ದಿನಗಳಲ್ಲಿ ಎಣಿಕೆ ಪುರ್ತಿಗೊಳಿಸಲಿ ಮತ್ತು ತುಂಬಾ ಕಷ್ಟ ಪಟ್ಟು ಅದನ್ನು ಆಚರಿಸಬಲ್ಲವರು (ಉಪವಾಸ ಆಚರಿಸದಿದ್ದರೆ ಪರಿಹಾರವಾಗಿ ಒಬ್ಬ ಬಡವನಿಗೆ ಊಟ ನೀಡಬೇಕು. (ಅಲ್ ಬಖರ : 184) ಇಲ್ಲಿ ಆರೋಗ್ಯವಂತ ಸ್ವಸ್ಥ ಹಾಗು ನಿಶ್ಯಕ್ತನ ಕುರಿತು ತಿಳಿಸಲಾಗಿದೆ. ನಿಶ್ಯಕ್ತ ವೃದ್ಧರು ಮತ್ತು ಯಾರ ಆರೋಗ್ಯ ಸುಧಾರಿಸಲು ಸಾಧ್ಯವಿಲ್ಲವೋ ಅಂತಹಾ ರೋಗಿಗಳು ಬಡವರಿಗೆ ಉಣಿಸಬೇಕು. ಇಬ್ನೆ ಅಬ್ಬಾಸ್(ಸ ಅ) ಈ ಸೂಕ್ತಿಯ ವ್ಯಾಖ್ಯಾನವನ್ನು ತಿಳಿಸುತ್ತಾ ಹೇಳುವರು; “ನಿಶ್ಯಕ್ತ ವೃದ್ಧರು (ಪುರುಷ ಮತ್ತು ಸ್ತ್ರೀ) ತಮ್ಮಿಂದ ತಪ್ಪಿದ ಪ್ರತಿಯೊಂದು ಉಪವಾಸಕ್ಕೂ ಒಂದೊಂದು ಬಡವನಿಗೆ ಉಣಿಸಬೇಕು”.

  ನಾಲ್ಕನೇ ಷರತ್ತು : ಒಬ್ಬ ವ್ಯಕ್ತಿಯು ಯಾತ್ರೆಯಲ್ಲಿದ್ದರೆ ಉಪವಾಸ ಅವಶ್ಯವಿಲ್ಲ ಏಕೆಂದರೆ ಅಲ್ಲಾಹ್’ನು ಹೇಳುವನು ‘ನಿಮ್ಮಪೈಕಿ (ಆ ದಿನಗಳಲ್ಲಿ) ರೋಗಿಯಾಗಿದ್ದವನು ಅಥವ ಪ್ರಯಣದಲ್ಲಿರುವವನು, ಬೇರೆ ದಿನಗಳಲ್ಲಿ ಎಣಿಕೆ ಪೂರ್ಣಗೊಳಿಸಲಿ’ ಇಸ್ಲಾಮಿ ವಿದ್ವಾಂಸರ ಸಮಿತಿಯು ಯಾತ್ರಿಗನು ಇಫ್ತಾರಿನಲ್ಲಿ ಪಾಲ್ಗೊಳ್ಳುವುದು ಔಚಿತ್ಯವೆಂದು ಹೇಳಿದ್ದಾರೆ, ಅವರಿಗೆ ಶ್ರೆಷ್ಟವಾದುದೆಂದರೆ ಉಪವಾಸವಿರದೆಯೇ ಈ ಅಲ್ಲಾಹ್’ನ ಅನುಗ್ರಹದ ಲಾಭ ಪಡೆಯಬಹುದಾಗಿದೆ. ಉಪವಾಸವಿರುವುದರಿಂದ ತನಗೆ ಹಾನಿಯುಂಟಾಗುವ ಸಂಭವವಿದ್ದರೆ ಅಂತಹಾ ಸಂಧರ್ಭದಲ್ಲಿ ಉಪವಾಸವಿಡುವುದು ನಿಷಿದ್ಧವಾಗಿದೆ, ಅಂತೆಯೇ ಅಲ್ಲಾಹ್’ನು ಹೇಳುವನು “ನಿಮ್ಮನ್ನು ನೀವು ಕೊಲ್ಲದಿರಿ ನಿಸ್ಸಂದೇಹವಾಗಿ ಅಲ್ಲಾಹ್’ನು ನಿಮ್ಮೊಂದಿಗೆ ದಯಾಮಯನು ಕರುಣಾನಿಧಿಯೂ ಆಗಿದ್ದಾನೆ”. ಈ ಸೂಕ್ತಿಯ ಅರ್ಥವೇನೆಂದರೆ ಮನುಷ್ಯನಿಗೆ ಯಾವುದರಿಂದ ಹಾನಿಯಾಗಲಿದೆಯೋ ಅದು ಅವನಿಗೆ ನಿಷಿದ್ಧವಿದೆ.

 ಐದನೇ ಷರತ್ತು: ವ್ಯಕ್ತಿಯಲ್ಲಿ ಯಾವುದೇರೀತಿಯ ಅಡಚಣೆಗಲಿಲ್ಲದಿದ್ದರೆ, ವಿಶೇಷವಾಗಿ ಮಹಿಳೆಯರಿಗಾಗಿ ಮುಹಮ್ಮದ್(ಸ)ರು ಹೇಳಿದರು; “ ಮಹಿಳೆಯರು ಋತುಸ್ರಾವದಲ್ಲಿದ್ದಾಗ ಹಾಗೂ ಪ್ರಸವದ (40 ದಿನ) ದಿನಗಳಲ್ಲಿದ್ದಾಗ ನಮಾಜ್ ಹಾಗೂ ಉಪವಾಸವನ್ನು ಬಿಡುವುದಿಲ್ಲವೇ” ಈ ಹದೀಸಿನ ಪ್ರಕಾರ ಮಹಿಳೆಯರು ಋತು ಸ್ರಾವದಲ್ಲಿ ಹಾಗೂ ಪ್ರಸವದಿನಗಳಲ್ಲಿ ನಮಾಜ್ ಹಾಗೂ ಉಪವಾಸ ನಿಷಿದ್ಧವಾಗಿದೆ. ಆದರೆ ಅವರು ತಪ್ಪಿರುವ ಉಪವಾಸಗಳನ್ನು ಮಾತ್ರ ಇತರ ದಿನಗಳಲ್ಲಿ ಪೂರೈಸಬೇಕು, ಒಂದು ವೇಳೆ ಆ ದಿನಗಳಲ್ಲಿ ಈ ಕರ್ಮಗಳನ್ನು ಮಾಡಿದರು ಅದು ಸ್ವೀಕಾರವಾಗುವುದಿಲ್ಲ, ಅಲ್ಲದೆ ಇತರ ದಿನಗಳಲ್ಲಿ ಅವರಿಗೆ ಪೂರೈಸಲೇಬೆಕಾಗಿದೆ. 

 

   ಉಪವಾಸವನ್ನು ಧರ್ಮದಲ್ಲಿ ಸೇರಿಸುವುದರ ರಹಸ್ಯಗಳು

  ಮೊದಲನೆಯದಾಗಿ; ಅಲ್ಲಾಹ್’ನ ಹಲವಾರು ವಿಶೇಷ ನಾಮಗಳಲ್ಲಿ ಒಂದು ಹೆಸರು ‘ಅಲ್ ಹಕೀಮ್’ ಒಂದು ನಾಮವೆಂದು ನಾವು ಮೊದಲು ಗಮನದಲ್ಲಿಡಬೇಕು. ‘ಅಲ್ ಹಕೀಮ್’ದ ಅರ್ಥ ಬುದ್ಧಿವಂತ ಎಂಬುದಾಗಿದೆ.      ಎರಡನೇಯದಾಗಿ; ಅಲ್ಲಾಹ್’ನು ಹೇಳಿದಂತೆ ತಾನೇ ಬುದ್ಧಿವಂತನಾಗಿದ್ದಾನೆ, ಅಲ್ಲದೆ ಅವನು ನಿರೂಪಿಸಿರುವ ಸರ್ವ ನಿಯಮಗಳು ಆದೇಶಗಳು ಬೌದ್ಧಿಕತೆಯನ್ನು ಹೊಂದಿವೆ. ಯಾವ ರೀತಿ ಅವನು ಬುದ್ಧಿವಂತನಾಗಿದ್ದಾನೆಯೋ ಅದೇ ರೀತಿ ಅವನು ರೂಪಿಸಿದ ನಿಯಮಗಳು ಹಾಗೂ ಆದೇಶಗಳು ಜ್ಞಾನದಿಂದ ಸಂಪೂರ್ಣಗೊಂಡಿವೆ. ಇವು ಕೆಲವೊಮ್ಮೆ ನಮಗೆ ಅರ್ಥವಾಗುತ್ತದೆ, ಕೆಲವೊಮ್ಮೆ ನಾವು ಅರೆಯದ ವಿಭಾಗದಲ್ಲಿ ನಮ್ಮ ಬುದ್ಧಿಗೆ ನಿಲುಕದಿದ್ದಲ್ಲಿ ಅರ್ಥವಾಗುವುದಿಲ್ಲ. ಮೂರನೆಯದಾಗಿ; ಅಲ್ಲಾಹ್’ನು ಉಪವಾಸವನ್ನು ಕಡ್ಡಾಯಗೊಳಿಸುವುದರೊಂದಿಗೆ ಅದರ ಕುರಿತು ಮಾಹಿತಿಯನ್ನು ಸಹ ನೀಡಿದ್ದಾನೆ, “ವಿಶ್ವಾಸಿಗಳೇ, ನೀವು ಧರ್ಮನಿಷ್ಟರಾಗಬೇಕೆಂದು, ನಿಮಗಿಂತ ಹಿಂದಿನವರಿಗೆ ಕಡ್ದಾಯಗೊಳಿಸಿದಂತೆ ನಿಮಗೂ ಉಪವಾಸಗಳನ್ನು ಕಡ್ಡಾಯಗೊಳಿಸಲಾಗಿದೆ,” (ಅಲ್ ಬಖರ : 183) ಈ ಸೂಕ್ತಿಯಿಂದ ತಿಳಿಯುವುದೇನೆಂದರೆ, ಅಲ್ಲಾಹ್’ನು ನಿಷ್ಠೆಯನ್ನು ಉಳಿಸುವನು, ನಿಷ್ಠೆ ಒಂದು ಒಳ್ಳೆಯ ಭಾವನೆಯಾಗಿದ್ದು ಅದು ಮನಸ್ಸಿನಿಂದ ಮೂಡುತ್ತದೆ. ಅದು ಮನುಷ್ಯನ ಮನದಲ್ಲಿ ಅಲ್ಲಾಹ್’ನ ಭಯವನ್ನು ಇರಿಸುತ್ತದೆ, ಹಾಗೂ ಆತನಿಗೆ ಪಾಪಕರ್ಮಗಳಿಂದ ಸುರಕ್ಷಿತವಾಗಿರಿಸುತ್ತದೆ, ಅಲ್ಲದೆ ಪುಣ್ಯ ಕಾರ್ಯದಲ್ಲಿ ಅವನಿಗೆ ಸಹಾಯ ಮಾಡುತ್ತದೆ. ಹಾಗಾಗಿ ಅಲ್ಲಾಹ್’ನು ನಿಷ್ಠೆಯಿಂದಿರುವಂತೆ ತಿಳಿಸಿದ್ದಾನೆ, ಅದಕ್ಕಾಗಿ ಯಾವುದರಿಂದ ದೂರವಿರಲು ಆದೇಶಿಸಿದನೋ ಅದರಿಂದ ದೂರವಿರಬೇಕು. ಒಟ್ಟಾರೆ ನಿಷ್ಠೆಯು ಉಪವಾಸದ ಮಾಧ್ಯಮವಾಗಿದೆ, ಇದಕ್ಕೆ ಸಂಭಂದಿಸಿದ ಎಲ್ಲಾ ಧಾರ್ಮಿಕ ವಿಷಯಗಳಿಗೆ ಸಹಾಯ ಮಾಡುತ್ತದೆ. ಇಸ್ಲಾಮಿ ವಿದ್ವಾಂಸರು ಉಪವಾಸದ ಕುರಿತು ಅನೇಕ ಧಾರ್ಮಿಕ ಮಾಹಿತಿಗಳನ್ನು ನೀಡಿದ್ದಾರೆ, ಅವುಗಳಲ್ಲಿ ನಾವು ಇಲ್ಲಿ ಕೆಲವೊಂದನ್ನು ಪ್ರಸ್ತುತ ಪಡಿಸುತ್ತೇವೆ, ಅದು ಉಪವಾಸಿಗನು ಧೃಢವಾಗಿದ್ದು ಅವುಗಳನ್ನು ಪಡೆದುಕೊಳ್ಳಲೆಂದೇ ಆಗಿದೆ.

 

     ಉಪವಾಸದ ಅನೇಕ ನಿಗೂಢತೆಗಳು ಅಥವ ರಹಸ್ಯಗಳು

1.      ಉಪವಾಸದಿಂದ ನಾವು ಅಲ್ಲಾಹ್’ನ ಅನುಗ್ರಹಿತ ವಸ್ತುಗಳಿಗೆ ಧನ್ಯವಾದಗಳನ್ನು ಸಲ್ಲಿಸುವೆವು. ಉಪವಾಸವು ಅನ್ನ ಪಾನೀಯಗಳನ್ನು ತ್ಯಜಿಸುವ ಇನ್ನೊಂದು ಹೆಸರಾಗಿದೆ. ಆಹಾರ ಪದಾರ್ಥಗಳು ಸೌಖ್ಯ ವಸ್ತುಗಳಲ್ಲಿಯೇ ಅತಿ ಮುಖ್ಯವಾದ ವಸ್ತುಗಳಾಗಿವೆ, ಸ್ವಲ್ಪ ಸಮಯದವರೆಗೆ ಇವುಗಳನ್ನು ತ್ಯಜಿಸಿ ಹಸಿದಿರುವುದರಿಂದ ಅದರ ಮಹತ್ವ ತಿಳಿಯುತ್ತದೆ. ಅವುಗಳು ಉಪಸ್ಥಿತವಿಲ್ಲದಾಗ ಅವುಗಳ ನೈಜ ಮೌಲ್ಯ ತಿಳಿಯುತ್ತದೆ, ಇವುಗಳೆಲ್ಲವೂ ನಮ್ಮಲ್ಲಿ ಧನ್ಯವಾದದ ಭಾವನೆಗಳನ್ನು ಹೆಚ್ಚಿಸುತ್ತವೆ.

2.     ಉಪವಾಸವು ಎಲ್ಲರೀತಿಯ ಧರ್ಮ ನಿಷಿದ್ಧ ಕಾರ್ಯಗಳನ್ನು ಬಿಡಿಸುವ ಮಾಧ್ಯಮವಾಗಿದೆ, ಏಕೆಂದರೆ ಮನಸ್ಸು ಅಲ್ಲಾಹ್’ನನ್ನು ಪ್ರಸನ್ನವಾಗಿಸಲು ಪಾಪ ಕೃತ್ಯಗಳಿಂದ (ದಂಡನೀಯ ಕಾರ್ಯಗಳಿಂದ) ಭಯಪಡುತ್ತಾ ಅನ್ನ ಪಾನೀಯ ಹಾಗೂ ಮಾನ್ಯ(ಒಪ್ಪಿಗೆಯಿರುವ) ಮಾಡಲಾಗಿರುವ ಕಾರ್ಯಗಳಿಂದ ನಿಲ್ಲುವಂತೆ ಬದ್ಧನಾದರೆ, ಅಮಾನ್ಯವಾದ (ನಿಷೇಧಿತ) ಕಾರ್ಯಗಳಿಂದ ದೂರವಿರಲು ಮೊದಲು ಬದ್ಧನಾಗುತ್ತಾನೆ, ಹಾಗಾಗಿ ಅಲ್ಲಾಹ್’ನು ನಿಷೇಧಿಸಿರುವ ಕಾರ್ಯಗಳಿಂದ ಉಳಿಯಲು ಇದೊಂದು ಕಾರಣವಾಗಿದೆ.

3.     ಉಪವಾಸವಿರುವುದರಿಂದ ಜನರು ಪ್ರಜ್ಞಾವಂತರಾಗಿರುತ್ತಾರೆ ಹಾಗೂ ಕಾಮಾಸಕ್ತಿ ಹತೋಟಿಯಲ್ಲಿರುತ್ತದೆ, ಹೊಟ್ಟೆ ತುಂಬಿದ್ದು ಮನಸ್ಸು ತೃಪ್ತಿಕರವಾಗಿದ್ದರೆ, ದುರಾಲೋಚನೆಗಳು ಕೆಟ್ಟ ಆಸೆ ಆಕಾಂಕ್ಷೆಗಳು ಉದ್ಭವವಾಗುತ್ತವೆ, ಆದರೆ ಹೊಟ್ಟೆ ಹಸಿದಿರುವಾಗ ಇಂತಹಾ ಆಲೋಚನೆಗಳು ಬರಲು ಸಾಧ್ಯವಿಲ್ಲ, ಹೀಗಾಗಿ ಎಲ್ಲರೂ ದುರಾಲೋಚನೆಗಳಿಂದ ಉಳಿಯುವರು ಅದಕ್ಕಾಗಿಯೇ ಮುಹಮ್ಮದ್(ಸ)ರು ಹೇಳಿದರು; “ಓ ಯುವಕರ ಸಮೂಹವೇ ನಿಮ್ಮಲ್ಲಿ ವಿವಾಹವಾಗುವ ಸಾಮರ್ಥ್ಯವಿದ್ದರೆ ವಿವಾಹವಾಗಿರಿ, ಏಕೆಂದರೆ ವಿವಾಹವು ದೃಷ್ಟಿಯನ್ನು ತಗ್ಗಿಸುತ್ತದೆ (ಲಜ್ಜೆ ಹಿಡಿತದಲ್ಲಿರುತ್ತದೆ) ತಮ್ಮ ಗುಪ್ತಾಂಗಗಳನ್ನು ರಕ್ಷಿಸುತ್ತದೆ (ಗುಪ್ತಾಂಗಗಳು ನಿಯಂತ್ರಣದಲ್ಲಿರುತ್ತವೆ) ಯಾರು ವಿವಾಹವಾಗಲು ಅಸಮರ್ಥರೋ ಅವರು ಉಪವಾಸವಿಡುತ್ತಿರಬೇಕು, ಏಕೆಂದರೆ ಅದು ಆತನಿಗೆ ರಕ್ಷಾಕವಚವಾಗಿದೆ”.

4.    ಉಪವಾಸದಿಂದ ಮನುಷ್ಯನ ಮನಸ್ಸಿನಲ್ಲಿ ನಿರ್ಗತಿಕರ, ಬಡವರ ಕುರಿತು ದಯೆ ಹಾಗೂ ಸ್ನೇಹ ಮನೋಭಾವನೆ ಮೂಡುತ್ತದೆ. ಉಪವಾಸದ ಅವಸ್ಥೆಯಲ್ಲಿ ಹಸಿವಿನಿಂದಿರುವುದರಿಂದ ಹಸಿವಿನ ಬೆಲೆ ಅರ್ಥವಾಗುತ್ತದೆ. ಯಾರು ಒಪ್ಪತ್ತಿನ ಊಟ, ಗಂಜಿ, ರೊಟ್ಟಿಗಾಗಿ ಪರಿತಪಿಸುತ್ತಿದ್ದಾರೋ ಅಂತಹವರ ಅಳಲು ಅರ್ಥವಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ, ಉಪವಾಸ ಬಡಬಗ್ಗರ ಕುರಿತು ಸಹಾನುಭೂತಿ, ಅನುಕಂಪ ಉಂಟುಮಾಡುವ ಒಂದು ಸಾಧನ ಹಾಗೂ ಕಾರಣವಾಗಿದೆ.

5.     ಉಪವಾಸವು ಮನುಷ್ಯನಿಗೆ ಧರ್ಯ, ಶಾಂತಿ, ಸಹನಶೀಲತೆ, ಹಾಗೂ ಕ್ಷಮಾಗುಣದ ಭಾವನೆಗಳನ್ನು ಹೆಚ್ಚಿಸುತ್ತದೆ. ಮನುಷ್ಯನ ದುಖಃ ಮತ್ತು ಕ್ರೋಧವೆಲ್ಲಿದೆಯೋ ಅದೇ ಶೈತಾನನ ಸಾಧನ ಶಕ್ತಿಯಾಗಿದೆ. ಉಪವಾಸದ ಅವಸ್ಥೆಯಲ್ಲಿ ದುಖಃ ಹಾಗೂ ಕ್ರೋಧ ಕುಂಠಿತಗೊಳ್ಳುತ್ತದೆ, ಆಗ ಮನುಷ್ಯನು ಶಾಂತಿಯಿಂದ ಇರುತ್ತಾನೆ, ಹಾಗೂ ಶೈತಾನನ ದುರಾಲೋಚನೆಗಳೂ ಸಹ ಕುಂಠಿತಗೊಳ್ಳುತ್ತವೆ. ಹೀಗಾಗಿ ನಮಗೆ ಪಾಪಕಾರ್ಯಗಳಿಂದ ಮತ್ತು ಧರ್ಮ ಸಮ್ಮತವಲ್ಲದ ಕಾರ್ಯಗಳಿಂದ ರಕ್ಷಣೆ ದೊರೆಯುತ್ತದೆ. ಶೈತಾನನು ಮೊದಲು ನಮಗೆ ಗೊಂದಲಕ್ಕಿಡುಮಾಡುವನು ಅದೇ ಗೊಂದಲದಲ್ಲಿ ನಾವು ಶೈತಾನನ ದುರ್ಮಾರ್ಗವನ್ನು ಅನುಸರಿಸುವ ಸಾಧ್ಯತೆಯಿದೆ. ಆದರೆ ಉಪವಾಸದಿಂದ ಅವನ ಕಾರ್ಯ ಸಾಧನೆಗಳು ಕಾರ್ಯಗತವಾಗಲು ಸಾಧ್ಯವಾಗುವುದಿಲ್ಲ. ಇಸ್ಲಾಮಿನ ಮಹಾ ಪಂಡಿತರಾದ ಇಬ್ನೆ ತೈಮಿಯಾ(ರಹಿಮಹುಲ್ಲಾ)ರವರು ಹೇಳುವರು, “ನಿಸ್ಸಂದೇಹವಾಗಿ ಆಹಾರ ಸೇವಿಸಿ ತೃಪ್ತರಾಗುವುದರಿಂದ ರಕ್ತದ ಉತ್ಪಾದನೆಯಾಗುತ್ತದೆ, ಹಾಗಾಗಿ ತೃಪ್ತಿಕರವಾದ ಸೇವನೆಯಿಂದ ಶೈತಾನನ ಸುಳಿವು ಹೆಚ್ಚಾಗುತ್ತದೆ, ಉಪವಾಸದಿಂದ ಇದೇ ದೇಹ ಮುದುರಿಕೊಳ್ಳುತ್ತದೆ, ಆಕಾರಣದಿಂದ ಮನಸ್ಸು ಪುಣ್ಯ ಹಾಗೂ ಧಾರ್ಮಿಕ ಕಾರ್ಯಗಳೆಡೆಗೆ ಪ್ರೆರಿತವಾಗುತ್ತದೆ. ಪಾಪ ಕಾರ್ಯಗಳಿಂದ ನಮ್ಮ ರಕ್ಷಣೆಯಾಗುತ್ತದೆ. (ಮಜ್’ಮುಆ ಫತಾವಾಹ್ : 246/25)

6.    ಉಪವಾಸಿಗನು ತನ್ನನ್ನು ಅಲ್ಲಾಹನು ನೋಡುತ್ತಿದ್ದಾನೆ ನಾನು ಅವನ ಕಣ್’ಗಾವಲಿನಲ್ಲಿದ್ದೇನೆ ಎಂಬಂತೆ ಸಮರ್ಥಿಸಿಕೊಳ್ಳುತ್ತಾನೆ, ಅಲ್ಲಾಹ್’ನು ತನ್ನ ಎಲ್ಲಾ ಕಾರ್ಯಗಳನ್ನು ಪರಿಕ್ಷಿಸುತ್ತಿದ್ದಾನೆ ಎಂಬ ಕಾರಣದಿಂದ ಮನಸ್ಸು ಪುಣ್ಯಕಾರ್ಯವನ್ನು ಮಾಡಲು ಇಚ್ಚಿಸುತ್ತದೆ, ಹಾಗೂ ಎಲ್ಲಾರೀತಿಯ ಪಾಪಕಾರ್ಯ ದುಷ್ಕೃತ್ಯಗಳನ್ನು ಮಾಡುವ ಸಾಮರ್ಥ್ಯವಿದ್ದರೂ ಅದರಿಂದ ಮನಸ್ಸು ದೂರವಿರುತ್ತದೆ.

7.     ಉಪವಾಸದಿಂದ ಪ್ರಾಪಂಚಿಕ ಆಕಾಂಕ್ಷೆಗಳಲ್ಲಿ ನೆಮ್ಮದಿ ದೊರೆಯುತ್ತದೆ ಮತ್ತು ಅಲ್ಲಾಹ್’ನ  ಕುರಿತು ಅವನ ಆರಾಧನಾ ಆಸಕ್ತಿ ಹೆಚ್ಚಾಗುತ್ತದೆ, ಅಲ್ಲಾಹ್’ನಿಂದ ದೊರೆಯುವ ಪುಣ್ಯ ಪ್ರತಿಫಲದ ಉತ್ಸಾಹ ಹೆಚ್ಚಾಗುತ್ತದೆ.

8.     ಉಪವಾಸಿಗನಿಗೆ ಅತ್ಯಧಿಕವಾಗಿ ಅಜ್ಞಾಪಾಲನೆಯ ಅಭ್ಯಾಸವಾಗಿಬಿಡುತ್ತದೆ, ಏಕೆಂದರೆ ಉಪವಾಸದ ಅವಸ್ಥೆಯಲ್ಲಿ ಅಲ್ಲಾಹ್’ನು ಆಜ್ಞಾಪಿಸಿದ ಎಲ್ಲಾ ಆಜ್ಞೆಗಳ ಪಾಲನೆ ಮಾಡುತ್ತಾನೆ, ಹೀಗಾಗಿಯೇ ಅದು ಅಭ್ಯಾಸವಾಗಿಬಿಡುತ್ತದೆ. ಉಪವಾಸಿಗನಾಗಿದ್ದಾಗ ಆಜ್ಞೆಗಳ ಪಾಲನೆ ಮಾಡುವುದರಿಂದ ಇದು ಸಾಧ್ಯವಾಗಿದೆ. ಇವೆಲ್ಲವೂ ಕೂಡ ಉಪವಾಸದ ಗೌಪ್ಯತೆಗಳಾಗಿದ್ದು(ರಹಸ್ಯಗಳಾಗಿದ್ದು) ನಿಮ್ಮ ಮುಂದಿಟ್ಟಿದ್ದೇವೆ.

 

ನೋಡಿರಿ

 ಇಸ್ಲಾಮಿನ ಸ್ಥಂಭಗಳು, ವಿಶ್ವಾಸದ ಸ್ಥಂಭಗಳು, ನಮಾಜ್, ಜಕಾತ್, ಹಜ್, ಆರಾಧನೆ, ಇತ್ಯಾದಿ.

 

ಸಂಧರ್ಭ

ಫುಸೂಲುನ್ ಫಿಸ್ ಸಿಯಾಮಿ ವತ್ ತರಾವಿಹ್ ವಜ್ ಜಕಾತ್. ಮುಹಮ್ಮದ್ ಬಿನ್ ಸಾಲೆಹ್ ಅಲಾಉಸ್ಮೈನ್.

ಹಾಶಿಯಾ ಇಬ್ನೆ ಖಾಸಿಮಾ ಅರ್ ರೈಜಿಲ್ ಮರಬಾ : 3/344. ಅಲಾ ಮೌಸೂಅತುಲ್ ಫಿಖ್ಖಿಯಹ್ : 9/28.

1247 Views
Correct us or Correct yourself
.
ಅಭಿಪ್ರಾಯ
ಪುಟದ ಮೇಲ್ಭಾಗದಲ್ಲಿರುವ